ಕುಲಪತಿಗಳ ಕಕ್ಷೆಯಿಂದ


ಪ್ರೊ. ಲೋಕನಾಥ್ ಎನ್.ಕೆ.
ಮಾನ್ಯ ಕುಲಪತಿಗಳು

ಭಾರತದ ವಿಶ್ವವಿದ್ಯಾನಿಲಯಗಳ ಪೈಕಿ, ಮೈಸೂರು ವಿಶ್ವವಿದ್ಯಾನಿಲಯವು ಕಳೆದೊಂದು ಶತಮಾನದಿಂದಲೂ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸುತ್ತಾ ಬಂದಿದೆ. ನೂತನ ಅಧ್ಯಯನ ವಿಷಯಗಳು ಹಾಗೂ ಜ್ಞಾನಶಿಸ್ತುಗಳ ಅಳವಡಿಕೆ ಮತ್ತು ಹೊಸ ಪ್ರಯತ್ನಗಳ ಫಲವಾಗಿ ಇತ್ತೀಚಿನ ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಗಣನೀಯವಾದ ಅಭಿವೃದ್ಧಿಯನ್ನು ಸಾಧಿಸಿದೆ. ನಾವು ನಮ್ಮಗಳ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ, ವೈಶಿಷ್ಟ್ಯಪೂರ್ಣವಾದ ಚಾರಿತ್ರ್ಯ ಹಾಗೂ ಅಸ್ಮಿತೆಯನ್ನು ಹೊಂದುತ್ತಾ, ಶೈಕ್ಷಣಿಕ ರಂಗದ ಸವಾಲುಗಳಿಗೆ ಪ್ರತಿಸ್ಪಂದಿಸುತ್ತಾ ಬಂದಿದ್ದೇವೆ. ನಮ್ಮ ನವೀನ ಆಲೋಚನೆಗಳು ಹಾಗೂ ಪ್ರಗತಿಪರ ಮನೋಧರ್ಮದ ಬಗ್ಗೆ ನಾವು ಅಭಿಮಾನ ಹೊಂದಿದ್ದೇವೆ ಹಾಗೂ ನಮ್ಮ ಗಮನವೆಲ್ಲ ಅಭಿವೃದ್ಧಿಯ ಸಾಧ್ಯತೆಗಳನ್ನು ಗುರುತಿಸುವಲ್ಲಿ ಕೇಂದ್ರೀಕೃತವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯವು ‘ಇನ್ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್’, ‘ಯೂನಿವರ್ಸಿಟಿ ವಿತ್ ಪೊಟೆನ್ಷಿಯಲ್ ಎಕ್ಸಲೆನ್ಸ್’, ‘ಸೆಂಟರ್ ಆಫ್ ಎಕ್ಸಲೆನ್ಸ್ ವಿತ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಇನ್ ಎ ಪರ್ಟಿಕ್ಯುಲರ್ ಏರಿಯ’ (ಸಿ.ಪಿ.ಇ.ಪಿ.ಎ.) ಎಂಬೆಲ್ಲ ಉಪಾಧಿಗಳಿಗೆ ಪಾತ್ರವಾಗಿದೆ. ಈಗ ‘ಇನ್ಸ್ಟಿಟ್ಯುಷನ್ ಆಫ್ ಎಮಿನೆನ್ಸ್’ ಎಂಬ ಸ್ಥಾನವನ್ನು ಪಡೆಯಲು ಸನ್ನದ್ಧವಾಗುತ್ತಿದೆ.

ಮೈಸೂರು ವಿಶ್ವವಿದ್ಯಾನಿಲಯವು ಮುಖ್ಯವಾಗಿ ವಿವಿಧ ಜ್ಞಾನಶಿಸ್ತುಗಳಲ್ಲಿ, ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನಗಳನ್ನು ಕೈಗೊಳ್ಳುವತ್ತ ತನ್ನನ್ನು ತೊಡಗಿಸಿಕೊಂಡಿದೆ. ಹಾಗೆಯೇ ಶ್ರೇಷ್ಠ ಸಂಶೋಧನಾ ಕಾರ್ಯಗಳಿಗೆ ಹೆಸರುವಾಸಿಯಾಗಿದೆ. ಶ್ರೇಷ್ಠ ಗುಣಮಟ್ಟವನ್ನು ಸಾಧಿಸಿರುವಂತಹ ಬೋಧಕರು ನಮ್ಮಲ್ಲಿದ್ದಾರೆ. ಇವರುಗಳಲ್ಲಿ ಹಲವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪುರಸ್ಕಾರ ಹಾಗೂ ಮನ್ನಣೆಗೆ ಭಾಜನರಾಗಿದ್ದಾರೆ.

ವೈಜ್ಞಾನಿಕ ಪ್ರಕಟಣೆಗಳಿಗಾಗಿ ದೇಶದ 20 ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪೈಕಿ ಒಂದೆಂದು ಗುರುತಿಸಲ್ಪಡುವ ನಮ್ಮ ವಿಶ್ವವಿದ್ಯಾನಿಲಯವು, ಸಂಶೋಧನೆ ಆಧಾರಿತ ಕಲಿಕೆಗೆ ಒತ್ತನ್ನು ನೀಡುತ್ತಿದೆ. ನಮ್ಮ ವಿದ್ಯಾರ್ಥಿಗಳಿಗೆ ಸಂಶೋಧನಾ ಕೇಂದ್ರಿತ ಶಿಕ್ಷಣದ ಫಲವು ದೊರಕಲಿದೆ.

ಉತ್ತಮ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಗಳ ಮುಖೇನ ಬೌದ್ಧಿಕ ಸಂವಾದವನ್ನು ಪ್ರೇರೇಪಿಸುವಂತಹ, ಜ್ಞಾನದ ಕೃಷಿಯನ್ನು ಕೈಗೊಳ್ಳುವಂತಹ ಪರಿಸರವನ್ನು ನಿರ್ಮಿಸುವತ್ತ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ. ಈ ಪರಿಸರದಿಂದ ನಿರ್ಮಾಣಗೊಳ್ಳುವ ವಿದ್ಯಾರ್ಥಿ ಸಮೂಹವು ನಮ್ಮ ಸಮಾಜಕ್ಕೆ ನಾಯಕತ್ವ, ದೂರದೃಷ್ಟಿ ಹಾಗೂ ಮಾರ್ಗದರ್ಶನವನ್ನು ಒದಗಿಸುವಂತಾಗಲಿ. ಇದಕ್ಕಾಗಿ ಉನ್ನತ ಮೌಲ್ಯಗಳಾದ ಜ್ಞಾನದ ಶ್ರೇಷ್ಠತೆ ಹಾಗೂ ಸತ್ಯ ನಿಷ್ಠೆಯನ್ನು ಎತ್ತಿ ಹಿಡಿಯಲು ನಾವು ಬದ್ಧರಾಗಿರುತ್ತೇವೆ.

ಈ ಸಂದರ್ಭದಲ್ಲಿ ನಾನು ವಿದ್ಯಾರ್ಥಿ ವೃಂದವನ್ನು, ಬಹುಶಿಸ್ತಿನ ಕಲಿಕೆಗೆ ಹಾಗೂ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶವೀಯುವ ಈ ಜ್ಞಾನದೇಗುಲಕ್ಕೆ ಸ್ವಾಗತಿಸುತ್ತೆನೆ.

ನಿಮ್ಮೆಲ್ಲರ ಜ್ಞಾನಯಾತ್ರೆ ಫಲಪ್ರದವಾಗಿರುತ್ತದೆಂಬ ನಂಬಿಕೆ ನನ್ನದಾಗಿದೆ.